ಸಾಹಿತ್ಯ
ಕಂದಪದ್ಯ

ಕಂದಪದ್ಯವು ಪ್ರಾಚೀನ ಮತ್ತು ಮಧ್ಯಕಾಲೀನ ಕನ್ನಡ ಕಾವ್ಯದಲ್ಲಿ ಬಹಳ ಜನಪ್ರಿಯವಾಗಿರುವ ಛಂದೋರೂಪ. ಅದರಲ್ಲಿ ನಾಲ್ಕು ಸಾಲುಗಳಿರುತ್ತವೆ. ಮೊದಲನೆಯ ಮತ್ತು ಮೂರನೆಯ ಸಾಲುಗಳು ಸಮಾನ ಸಂಖ್ಯೆಯ ಮಾತ್ರೆಗಳನ್ನು ಹೊಂದಿರುತ್ತವೆ. ಹಾಗೆಯೇ ಎರಡು ಮತ್ತು ನಾಲ್ಕನೆಯ ಸಾಲುಗಳಲ್ಲಿ ಸಮಾನ ಸಂಖ್ಯೆಯ ಮಾತ್ರೆಗಳಿರುತ್ತವೆ. ಇಂತಹ ರಚನೆಗಳನ್ನು ಅರ್ಧಸಮ ವೃತ್ತಗಳೆಂದು ಕರೆಯುತ್ತಾರೆ. ಕಂದಪದ್ಯವು ಮಾತ್ರಾವೃತ್ತಗಳ ಸಾಲಿಗೆ ಸೇರುವ ಛಂದೋರೂಪ. ಆದರೂ ಅದರ ರಚನೆಯಲ್ಲಿ, ಅಕ್ಷರಗಣದ ರಚನೆಗಳಿಗೆ ಸಂಬಂಧಿಸಿದ ಕೆಲವು ಚಿಕ್ಕ ಪುಟ್ಟ ಕರಾರುಗಳನ್ನು ಹಾಕಲಾಗಿದೆ. ಕಂದಪದ್ಯಗಳು, ಕನ್ನಡಸಾಹಿತ್ಯದ ಮೊದಲ ಹಂತದಿಂದಲೂ ಬಳಕೆಯಲ್ಲಿದೆಯೆಂಬ, ಹಾಗೂ ಅವುಗಳನ್ನು ಶಾಸನ ಕವಿಗಳು ಮತ್ತು ಚಂಪೂ ಕವಿಗಳು ವಿಪುಲವಾಗಿ ಬಳಸಿರುವರೆಂಬ ಅಂಶಗಳನ್ನು ಗಮನಿಸಿದಾಗ ಈ ಚಿಕ್ಕ ಪುಟ್ಟ ಕರಾರುಗಳು ಮುಖ್ಯವಾಗುತ್ತವೆ. ಚಂಪೂ ಕಾವ್ಯಗಳಲ್ಲಿ, ಕಂದಗಳನ್ನು ವರ್ಣವೃತ್ತಗಳು ಮತ್ತು ಅನೇಕ ಅಂಶಗಣದ ಛಂದೋರೂಪಗಳ ಸಂಗಡವೇ ಬಳಸುತ್ತಿದ್ದರು. ಕೇವಲ ಕಂದಪದ್ಯಗಳಲ್ಲೇ ರಚಿತವಾಗಿರುವ ಕಾವ್ಯಗಳು ಸಿಗುವುದು ಬಹಳ ಅಪರೂಪ. ಕಂದಪದ್ಯಗಳನ್ನು ಕಾವ್ಯಗಳು,ಶಾಸ್ತ್ರಗ್ರಂಥಗಳು ಮತ್ತು ಶಾಸನಗಳು ಎಂಬ ಮೂರು ಪ್ರಭೇದಗಳಲ್ಲಿಯೂ ಕಾಣಬಹುದು.

ಕಂದ ಎಂಬ ಪದ ಮತ್ತು ಆ ಛಂದೋರೂಪ ಎರಡನ್ನೂ ಸಂಸ್ಕೃತದ ಆರ್ಯಾ ಮತ್ತು ಪ್ರಾಕೃತದ ಖಂದಇ ಎಂಬ ಮೂಲಗಳಿಗೆ ಜೋಡಿಸಲಾಗಿದೆ. ಅದು, ಕನ್ನಡಕ್ಕೆ ಸಹಜವಾದ ದ್ರಾವಿಡಮೂಲದ ಆಂಶಛಂದಸ್ಸಿಗೆ ಸೇರಿದ್ದಲ್ಲ. ಈ ವಿಷಯಗಳನ್ನು ಕುರಿತ ತಮ್ಮ ವಾದಗಳನ್ನು ಸಮರ್ಥಿಸಲು, ವಿದ್ವಾಂಸರು ಹಲವು ವಿಷಯಗಳನ್ನು ಮುಂದಿಟ್ಟಿದ್ದಾರೆ. ಮಾದರಿ ಕಂದಪದ್ಯವು ಈ ಕೆಳಗೆ ಕೊಟ್ಟಿರುವ ರಚನೆಯನ್ನು ಹೊಂದಿರುತ್ತದೆ.

4 4 4

4 4 4 4 4

4 4 4

4 4 4 4 4

ಇಲ್ಲಿ ನಾಲ್ಕು ಎಂಬ ಸಂಖ್ಯೆಯು, ನಾಲ್ಕು ಮಾತ್ರೆಗಳ ಒಂದು ಗಣವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಕಂದಪದ್ಯದಲ್ಲಿ ತಲಾ ನಾಲ್ಕು ಮಾತ್ರೆಗಳ ಹದಿನಾರು ಗಣಗಳಿದ್ದು ಒಟ್ಟು 64 ಮಾತ್ರೆಗಳಿರುತ್ತವೆ.(ಪ್ರತಿ ಅರ್ಧದಲ್ಲಿಯೂ 32 ಮಾತ್ರೆಗಳು) ಇಲ್ಲಿ ಬೆಸ ಸಂಖ್ಯೆಯ ಗಣಗಳು ಗಣ ಆಗಿರಬಾರದು. ಗಣ ಎಂದರೆ, ಲಘು-ಗುರು-ಲಘು ಎಂಬ ಅಕ್ಷರವಿನ್ಯಾಸ ಇರುವ ಗಣ. ಆದರೆ, 6 ಮತ್ತು 12 ನೆಯ ಗಣಗಳು ಕಡ್ಡಾಯವಾಗಿ ಗಣ ಆಗಿರಬೇಕು ಅಥವಾ ನಾಲ್ಕೂ ಲಘು ಆಗಿರುವ ಗಣವಾಗಿರಬೇಕು ಎಂಬ ನಿಯಮವೂ ಇದೆ. ಎಂಟು ಮತ್ತು ಹದಿನಾರನೆಯ ಗಣಗಳ ಕೊನೆಯಲ್ಲಿ ಗುರು ಅಕ್ಷರವೇ ಇರಬೇಕು. ಪದ್ಯವನ್ನು ಹೇಳುವಾಗ ಆರು ಮತ್ತು ಹನ್ನರಡನೆಯ ಗಣಗಳ ಮೊದಲನೆಯ ಅಕ್ಷರದ ನಂತರ, ಕೊಂಚ ನಿಲುಗಡೆ(ಯತಿ) ಇರಬೇಕೆಂಬ ನಿಯಮವೂ ಇದೆ. ಏಳು ಮತ್ತು ಹದಿನಾಲ್ಕನೆಯ ಗಣಗಳಲ್ಲಿ ನಾಲ್ಕು ಗುರುಗಳಿದ್ದರೆ, ಆಗ ಅವು ಹೊಸ ಪದವೊಂದರಿಂದ ಶುರುವಾಗಬೇಕು. ಕಂದಪದ್ಯಗಳಲ್ಲಿ ಆದಿಪ್ರಾಸದ ನಿಯಮಗಳನ್ನು ಬಹಳ ನಿಷ್ಠುರವಾಗಿ ಪಾಲಿಸಬೇಕು. ಅನೇಕ ಒಳ ಪ್ರಾಸಗಳಿದ್ದರೂ ಅವು ನಿಯಮಬದ್ಧವಲ್ಲ. ವಿದ್ವಾಂಸರು, ಕಂದಪದ್ಯದಲ್ಲಿಯೇ ವಿಭಿನ್ನ ಪ್ರಭೇದಗಳನ್ನು ಗುರುತಿಸುವ ಪ್ರಯತ್ನಗಳನ್ನು ಮಾಡಿರುವುರಾದರೂ ಅದರಲ್ಲಿ ಯಶಸ್ವಿಯಾಗಿಲ್ಲ.

ಕಂದಪದ್ಯದ ವಿಕಾಸವನ್ನು ಮೊದಮೊದಲ ಹಂತಗಳಿಂದ ಹಿಡಿದು, ಆಧುನಿಕ ಕಾಲದವರೆಗೆ ಗಮನಿಸಿದಾಗ, ಕ್ರಮೇಣ ನಿಯಮಗಳನ್ನು ಮುರಿಯುವ ಪ್ರವೃತ್ತಿಯು ಕಂಡುಬರುತ್ತದೆ. ಈ ಮಾತು ಕಾವ್ಯಗಳು ಮತ್ತು ಶಾಸನಗಳೆರಡರ ವಿಷಯದಲ್ಲಿಯೂ ನಿಜ. ಪಂಪ, ರನ್ನ, ನಾಗವರ್ಮ, ಜನ್ನ ಮುಂತಾದ ಹಳೆಯ ಕವಿಗಳು ಈ ನಿಯಮಗಳನ್ನು ಬಹಳ ಚೆನ್ನಾಗಿ ಪಾಲಿಸಿದ್ದಾರೆ. ನಂತರದ ದಿನಗಳಲ್ಲಿ ಎಲ್ಲ ನಿಯಮಗಳನ್ನೂ ಮುರಿದಿರುವುದಕ್ಕೆ ನಿದರ್ಶನಗಳು ಸಿಗುತ್ತವೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಸಿಂಗನಗದ್ದೆ ಎಂಬ ಹಳ್ಳಿಯ ಜೈನ ಮಠದಲ್ಲಿ ಸಿಕ್ಕಿರುವ ಎರಡು ಪದ್ಯಗಳನ್ನು, ಈವರೆಗೆ ಸಿಕ್ಕಿರುವ ಕನ್ನಡದ ಅತ್ಯಂತ ಪ್ರಾಚೀನ ಕಂದಪದ್ಯಗಳೆಂದು ಗುರುತಿಸಲಾಗಿದೆ. ಕವಿರಾಜಮಾರ್ಗಕ್ಕಿಂತ ಹಿಂದೆಯೇ ರಚಿತವಾಗಿರಬಹುದಾದ ಕೇವಲ ಮೂರು ಪದ್ಯಗಳು ನಮಗೆ ದೊರಕಿವೆ. ಆದರೆ, ಚಂಪೂಕಾವ್ಯಗಳಲ್ಲಿ ಅವುಗಳನ್ನು ಹೇರಳವಾಗಿ ಬಳಸಲಾಗಿದೆ. ಅವುಗಳು ಕಂದವನ್ನೇ ತಮ್ಮ ಪ್ರಧಾನ ಅಭಿವ್ಯಕ್ತಿಯಾಗಿ ಇಟ್ಟುಕೊಂಡು ಉಳಿದ ವೃತ್ತಗಳನ್ನು ಅಗತ್ಯಕ್ಕೆ ಅನುಗುಣವಾಗಿ ಬಳಸಿವೆ. ಶ್ರೀವಿಜಯ, ಪಂಪ, ರನ್ನ, ನಾಗವರ್ಮ, ನಾಗಚಣದ್ರ, ಹರಿಹರ ಮುಂತಾದ ಅನೇಕ ಕವಿಗಳ ವಿಚಾರದಲ್ಲಿ ಈ ಮಾತು ನಿಜ. ಜನ್ನನ ಯಶೋಧರಚರಿತೆಯು ಬಹುಮಟ್ಟಿಗೆ ಕಂದಪದ್ಯಗಳಲ್ಲಿಯೇ ರಚಿತವಾಗಿದೆ. (300 ಕಂದ ಪದ್ಯಗಳು ಮತ್ತು 10 ವೃತ್ತಗಳು) ಬೇರೆ ಕೆಲವು ಕಾವ್ಯಗಳು ವಚನ ಗದ್ಯವನ್ನು ಸಂಪೂರ್ಣವಾಗಿ ಬಿಟ್ಟು ಕೇವಲ ವೃತ್ತಗಳು ಹಾಗೂ ಕಂದಪದ್ಯಗಳನ್ನು ಮಾತ್ರ ಬಳಸಿವೆ. ರತ್ನಾಕರವರ್ಣಿಯ ತ್ರಿಲೋಕ ಶತಕಮತ್ತು ಕೊಂಡಗುಳಿ ಕೇಶಿರಾಜನ ಷಡಕ್ಷರ ಕಂದಗಳಂತಹ ಕೃತಿಗಳನ್ನು ಕೇವಲ ಕಂದಪದ್ಯಗಳಿಂದಲೇ ಕಟ್ಟಲಾಗಿದೆ.

ಕನ್ನಡದಲ್ಲಿ ಶಾಸ್ತ್ರಗ್ರಂಥಗಳನ್ನು ಬರೆದಿರುವ ಲೇಖಕರಿಗೂ ಕಂದಪದ್ಯವು ಬಹಳ ಪ್ರಿಯವಾದ ಛಂದೋರೂಪ. ಇಮ್ಮಡಿ ನಾಗವರ್ಮನ ಕಾವ್ಯಾವಲೋಕನ, ಕೇಶಿರಾಜನ ಶಬ್ದಮಣಿದರ್ಪಣ ಮತ್ತು ಅಭಿನವಚಂದ್ರನ ಅಶ್ವಶಾಸ್ತ್ರಗಳು ಈ ಮಾತಿಗೆ ಕೆಲವು ನಿದರ್ಶನಗಳು.

ಈ ಛಂದೋರೂಪದ ಕವಿಪ್ರಿಯತೆಗೆ ಅನೇಕ ಕಾರಣಗಳಿವೆ. ಇದರಲ್ಲಿ ಕನ್ನಡ ಮತ್ತು ಸಂಸ್ಕೃತ ಪದಗಳನ್ನು ತೊಡಕಿಲ್ಲದೆ, ಪರಿಣಾಮಕಾರಿಯಾಗಿ ಸಂಯೋಜನೆ ಮಾಡಬಹುದು. ಲಯವಿನ್ಯಾಸಗಳಿಗೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡಲು ಇದರಲ್ಲಿ ಮುಕ್ತ ಅವಕಾಶವಿದೆ. ಸನ್ನಿವೇಶದ ಅಗತ್ಯಕ್ಕೆ ತಕ್ಕಂತೆ, ಭಾವಗೀತೆ, ಸಂಭಾಷಣೆ ಮತ್ತು ವರ್ಣನೆಗಳೆಂಬ ಮೂರೂ ಬಗೆಯ ನಿರೂಪಣೆಗಳಿಗೆ ಇಲ್ಲಿ ಅವಕಾಶವಿದೆ. ಆದ್ದರಿಂದಲೇ ಕವಿಗಳು ಮತ್ತು ವಿದ್ವಾಂಸರು ಈ ಛಂದೋರೂಪವನ್ನು ಮನತುಂಬಿ ಹೊಗಳಿದ್ದಾರೆ. ಇನ್ನು ಮುಂದೆ ನಿಯಮಬದ್ಧವಾಗಿಯೂ ಕಾವ್ಯಾತ್ಮಕವಾಗಿಯೂ ಇರುವ ಎರಡು ಕಂದಪದ್ಯಗಳನ್ನು ಮಾದರಿಯಾಗಿ ಕೊಡಲಾಗಿದೆ.

 

  1. ಕಾವೇ/ರಿಯಿಂದ/ಮಾಗೋ/

ದಾವರಿ/ವರಮಿ/ರ್ಪನಾಡ/ದಾ ಕ/ನ್ನಡದೊಳ್/ |

ಭಾವಿಸಿ/ದ ಜನಪ/ದಂ ವಸು/

ಧಾವಳ/ಯವಿಲೀ/ನ ವಿಶದ/ ವಿಷಯವಿ/ಶೇಷಂ/ || (ಕವಿರಾಜಮಾರ್ಗಂ, ಶ್ರೀವಿಜಯ, 1-36)

  1. ಬಿಡದೆ ಪೊ/ಗೆ ಸುತ್ತೆ/ ತೋಳಂ/

ಸಡಿಲಿಸ/ದಾ ಪ್ರಾ/ಣವಲ್ಲ/ಭರ್ ಪ್ರಾ/ಣಮನಂ/ |

ದೊಡೆಗಳೆ/ದರೋಪ/ರೋಪರೊ/

ಳೊಡಸಾ/ಯಲ್ಪಡೆ/ದರಿನ್ನ/ವೇಂ ಸೈ/ಪೊಳವೇ/ || (ಆದಿಪುರಾಣ, ಪಂಪ, 5-24)

 

ಮುಂದಿನ ಓದು:

    1. ಪ್ರಾಚೀನ ಕನ್ನಡ ಸಾಹಿತ್ಯರೂಪಗಳು, ಆರ್.ಎಸ್. ಮುಗಳಿ, 1973, ಮೈಸೂರು
    2. ಕನ್ನಡ ಛಂದಃಸ್ವರೂಪ, ಟಿ.ವಿ. ವೆಂಕಟಾಚಲಶಾಸ್ತ್ರೀ, 1978, ಮೈಸೂರು
    3. ಕನ್ನಡ ಛಂದಸ್ಸಂಪುಟ, ಸಂ. ಎಲ್. ಬಸವರಾಜು, 1974, ಮೈಸೂರು
    4. ಕಂದ-ಲಕ್ಷಣ, ಉಗಮ, ಇತಿಹಾಸ, ಎನ್.ಎಸ್. ತಾರಾನಾಥ, (‘ಕನ್ನಡ ಛಂದಸ್ಸಿನ ಚರಿತ್ರೆಯ ಮೊದಲ ಸಂಪುಟದಲ್ಲಿ) 1980, ಕನ್ನಡ ಅಧ್ಯಯನಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

     

ಮುಖಪುಟ / ಸಾಹಿತ್ಯ